ಕೀಲುಗಳು ಮತ್ತು ತಂತುಗಟ್ಟುಗಳು

 ಎರಡು ಅಥವಾ ಹೆಚ್ಚು ಮೂಳೆಗಳು ಸೇರುವಲ್ಲಿ ಅವುಗಳ ನಡುವಿನ ಚಲನೆಯ ವೈಶಿಷ್ಟ್ಯವನ್ನು ಅನುಸರಿಸಿ ಕೀಲುಗಳ (ಜಾಯಿಂಟ್ಸ್) ರಚನೆ ಆಗುತ್ತದೆ.  ಎರಡು ಅಥವಾ ಹೆಚ್ಚು ಮೂಳೆಗಳನ್ನು ಪರಸ್ಪರ ಬಂಧಿಸಿಡುವ, ಗಮ್ಯತೆಯೂ ಸಾಮಥ್ರ್ಯವೂ ಇರುವ ಊತಕವೇ ತಂತುಗಟ್ಟು (ಲಿಗಮೆಂಟ್), ಕೀಲುಗಳು  ಮೂಳೆಗಳ ಅಂಚಿನಲ್ಲಿ ಇರುತ್ತವೆ.  ಕೆಲವು ಕೀಲುಗಳಲ್ಲಿ ಚಲನೆಗೂ ಆಸ್ಪದವಿರದಿದ್ದರೆ  (ತಲೆ ಬುರುಡೆ) ಇನ್ನೂ ಕೆಲವು ಕಡೆ ಸ್ವಲ್ಪವಾದರೂ ಚಲನೆಗೆ ಅವಕಾಶವಿರಬೇಕಾಗುತ್ತದೆ (ಬೆನ್ನುಮೂಳೆಗಳು).  ಉಳಿದ ಕಡೆ ಸಂಪೂರ್ಣ ಚಲನೆ ಅತ್ಯಗತ್ಯವಾಗಿರುತ್ತದೆ (ಕೈಕಾಲುಗಳು).  ಕೀಲುಗಳನ್ನು ತಂತುಕೀಲುಗಳು (ಫೈಬ್ರಸ್ ಜಾಯಿಂಟ್ಸ್), ಮೆಲ್ಲೆಲುಬು ಕೀಲುಗಳು (ಕಾರ್ಟಿಲೇಜಿನಸ್ ಜಾಯಿಂಟ್ಸ್) ಮತ್ತು ಸೈನೋವಿಯಲ್ ಕೀಲುಗಳೆಂದು ವಿಂಗಡಿಸಬಹುದು.

 ತಂತುಕೀಲುಗಳಲ್ಲಿ ಮೂಳೆಗಳ ಹೊರಮೈಯನ್ನು ತಂತುಗಳು ಬಿಗಿಯಾಗಿ ಬಂಧಿಸಿರುತ್ತವೆ.  ಈ ಕೀಲುಗಳಲ್ಲಿ ಯಾವ ವಿಧವಾದ ಚಲನೆಗೂ ಅವಕಾಶವಿರುವುದಿಲ್ಲ (ಉದಾಹರಣೆಗೆ ತಲೆಬುರುಡೆಯ ಕೀಲುಗಳು).  ಈ ಕೀಲುಗಳನ್ನು ಹೊಲಿಗೆ ಕೀಲುಗಳು, ಬೆಣೆಕುಳಿ ಕೀಲುಗಳು ಮತ್ತು ಅಸ್ಥಿರಜ್ಜು ಸಂಧಿಗಳೆಂದು ಪ್ರತ್ಯೇಕಿಸಬಹುದು. ಹೊಲಿಗೆ ಕೀಲುಗಳನ್ನು ಇನ್ನೂ ಅನೇಕ ಚಿಕ್ಕ ಚಿಕ್ಕ ಪಂಗಡಗಳಾಗಿ ವಿಂಗಡಿಸಬಹುದು.  ಮೂಳೆಗಳ ಅಂಚು ಗರಗಸದ ಹಲ್ಲುಗಳಂತೆ ಇದ್ದರೆ ಅದಕ್ಕೆ ದಂತುರ ಹೊಲಿಗೆ ಕೀಲೆಂದು ಹೆಸರು; ಅಂಚಿನಲ್ಲಿ ಹಲ್ಲುಗಳಂತಿದ್ದರೆ ಅದು ಶಲ್ಕ ಕೀಲು.  ಸ್ಪಷ್ಟವಾದ ಅಂಚುಳ್ಳ ಕೀಲು ಎಂಬ ಪ್ರಭೇದವೂ ಉಂಟು.  ಸ್ಪಷ್ಟವಾದ ಕೀಲುಗಳಲ್ಲಿ ಮೂಳೆಯ ಅಂಚುಗಳು ಯಾವ ವಿಧವಾದ ರೂಪ ಬದಲಾವಣೆಯಿಲ್ಲದೆ ಒಂದನ್ನೊಂದು ಹಾಗೆಯೇ ಅಂಟಿಕೊಂಡಿದರುತ್ತವೆ.  ಇದಕ್ಕೆ ಸಮತಲ ಕೀಲು ಎಂದು ಹೆಸರು. 

 ಒಂದು ಮೂಳೆಯ ಅಂಚನ್ನು ಇನ್ನೊಂದರ ಅಂಚು ಮುಚ್ಚಿಕೊಂಡಾಗ ಆ ಮೂಳೆಗಳ ಅಂಚಿನಲ್ಲಿ ರೂಪಬದಲಾವಣೆಯಾಗಿದ್ದರೆ ಅಂಥವನ್ನು ಲಿಂಬಸ್ ಹೊಲಿಗೆ ಸೇರುವ ಸ್ಯೂಚರ್ ಎಂದು ಕರೆಯುತ್ತಾರೆ. 

 ಬಣೆಕುಳಿ ಕೀಲು (ಪೆಗ್ ಎಂಡ್ ಸಾಕೆಟ್ ಜಾಯಿಂಟ್): ಇದರಲ್ಲಿ ಒಂದು ಮೂಳೆಯ ಶಂಕುವಿನಾಕರದ ಭಾಗ ಇನ್ನೊಂದು ಮೂಳೆಯಲ್ಲಿರುವ ಕುಳಿಯಲ್ಲಿ ಕುಳಿತುಕೊಂಡಿರುತ್ತದೆ.  ಇಂಥ ಕೀಲುಗಳನ್ನು ಹಲ್ಲು ಮತ್ತು ದವಡೆಯ ಕೀಲುಗಳಲ್ಲಿ ನೋಡಬಹುದು. 

ಅಸ್ಥಿರಜ್ಜು ಸಂಧಿ: ಇದರಲ್ಲಿ ಮೂಳೆಗಳು ಎದುರುಬದುರಾಗಿ ಬಂದಾಗ ಅವನ್ನು ಅಂತರ ಮೂಳೆಗಳ ತಂತುಗಳು ಬಂಧಿಸಿರುತ್ತವೆ. 

ಮೆಲ್ಲೆಲುಬು ಕೀಲು: ಎರಡು ಮೂಳೆಗಳನ್ನು ಮೃದ್ವಸ್ತಿಗಳು ಕೂಡಿಸಿ ಅವುಗಳಲ್ಲಿ ಅಲ್ಪಚಲನೆಗೆ ಅವಕಾಶ ಮಾಡಿಕೊಡುತ್ತವೆ.  ಈ ಕೀಲುಗಳಲ್ಲಿ ಎರಡು ವಿಧಗಳುಂಟು; ಪ್ರಾಥಮಿಕ ಮೃದ್ವಸ್ಥಿ ಕೀಲುಗಳು ಮತ್ತು ದ್ವಿತೀಯಕ ಮೃದ್ವಸ್ಥಿ ಕೀಲುಗಳು. ಪ್ರಾಥಮಿಕ ಮೃದ್ವಸ್ಥಿ ಕೀಲುಗಳಲ್ಲಿನ (ಪ್ರೈಮರಿ ಕಾರ್ಟಿಲೇಜಿನಸ್ ಜಾಯಿಂಟ್ಸ್) ಮೃದ್ವಸ್ಥಿ ಕಾಲಕ್ರಮೇಣ ಮೂಳೆಗಳಾಗಿ ಪರಿವರ್ತಿಸಲ್ಪಟ್ಟು ಆ ಕೀಲುಗಳಲ್ಲಿ ಯಾವ ಚಲನೆಗೂ ಅವಕಾಶವಿರುವುದಿಲ್ಲ.  ದ್ವಿತೀಯಕ (ಸೆಕಂಡರಿ) ಮೃದ್ವಸ್ಥಿ ಕೀಲುಗಳಲ್ಲಿ ಈ ವಿಧವಾದ ಬದಲಾವಣೆಗೆ ಅವಕಾಶವಿರುವುದಿಲ್ಲ.  ಈ ಕೀಲುಗಳು ತಂತುಗಳಿಂದ ಬಿಗಿಯಲ್ಪಟ್ಟಿರುತ್ತವೆ.  ಇವುಗಳಲ್ಲಿ ಸ್ವಲ್ಪ ಚಲನೆಗೆ ಅವಕಾಶವಿದೆ.  ಹೀಗೆ ಉತ್ಪತ್ತಿಯಾಗುವ ಕೀಲುಗಳಲ್ಲಿ ಭಾಗವಹಿಸುವ ಮೂಳೆಗಳ ಮಧ್ಯೆ ಮೃದ್ವಸ್ಥಿ ಮತ್ತು ತಂತುಗಳಿಂದ ಸೃಷ್ಟಿಸಲ್ಪಟ್ಟ ತಂತುಮೃದ್ವಸ್ಥಿ ಬಿಲ್ಲೆ ಇರುತ್ತವೆ.  ಈ ತರಹದ ಕೀಲುಗಳನ್ನು ಬೆನ್ನುಮೂಳೆಗಳಲ್ಲಿ ಕಾಣಬಹುದು. 

ಸೈನೋವಿಯಲ್ ಕೀಲು :  ದೇಹದ ಹಲವಾರು ಕೀಲುಗಳು ಈ ಗುಂಪಿಗೆ ಸೇರಿವೆ.  ಇಂಥ ಕೀಲಿನಲ್ಲಿ ಎರಡು ಮೂಳೆಗಳು ಸೇರಿರುವಲ್ಲಿ ಮೃದ್ವಸ್ಥಿ ಇದ್ದರೂ ಅವು ಒಂದನ್ನೊಂದು ಕೂಡಿಕೊಂಡಿರುವುದಿಲ್ಲ. ಅಲ್ಲಿ ಸ್ವಲ್ಪ ಸ್ಥಳಾವಕಾಶವಿರುತ್ತದೆ.  ಇದಕ್ಕೆ ಕೀಲುಕುಳಿ (ಜಾಯಿಂಟ್ ಕ್ಯಾವಿಟಿ) ಎಂದು ಹೆಸರು.  ಸೈನೋವಿಯಲ್ ಕೀಲುಗಳನ್ನು ಒಂದು ವಿಧವಾದ ಗಟ್ಟಿ  ಪೋರೆ ಆವರಿಸಿದೆ.  ಒಳಭಾಗದಲ್ಲಿ ಸೈನೋವಿಯಲ್ ಪೊರೆಯು ಅಸ್ತರಿ ಹಾಕಿದಂತಿದೆ.  ಕೀಲಿನ ಚಲನ ಸ್ವಾತಂತ್ರ್ಯ ಗಮನಾರ್ಹವಾಗಿದೆ.  ಮಣಿಗಂಟು, ಮಂಡಿಕೀಲುಗಳು ಇದಕ್ಕೆ ನಿದರ್ಶನ.  ಸೈನೋವಿಯಲ್ ಕೀಲುಗಳಲ್ಲಿ ಕೀಲುಕುಳಿಯ ಜೊತೆಗೆ ಮೃದ್ವಸ್ಥಿ ಮತ್ತು ತಂತುಗಳಿಂದ ರಚಿತವಾದ ತಂತುಮೃದ್ವಸ್ಥಿಬಿಲ್ಲೆ (ಫೆಬ್ರೊಕಾರ್ಟಿಲೇಜಿನಸ್ ಡಿಸ್ಕ್) ಇದೆ.  ಈ ಬಿಲ್ಲೆ ಕೀಲುಗಳ ನಾನಾವಿಧವಾದ ಚಲನೆಗೆ ಅವಕಾಶಮಾಡಿಕೊಡುವುದಲ್ಲದೆ ಕೀಲಿನ ಮೃದ್ವಸ್ಥಿಗಳು ಹಾಳಾಗದಂತೆ ಸಹ ನೋಡಿಕೊಳ್ಳ್ಳುತ್ತದೆ.  ಕೀಲಿನ ಸುತ್ತ ಆವರಿಸಿರುವ ಗಟ್ಟಿಪೊರೆ ಕೆಲವು ಕಡೆ ದಪ್ಪವಾಗಿ ಕೀಲಿನ ತಂತುಗಟ್ಟುಗಳಾಗಿ ಮಾರ್ಪಡುತ್ತದೆ.  ಇವು ಸಮಾಂತರವಾಗಿ ಅಳವಟ್ಟಿವೆ.  ತಂತುಗಟ್ಟು ಒರಟು, ಗಟ್ಟಿ, ಮಣಿಯಲು ಸಹಕಾರಿ, ಹೆಚ್ಚಿಗೆ ಹಿಗ್ಗದು. ದೇಹದಲ್ಲಿ ಬೇರೆ ಬೇರೆ ಕೀಲುಗಳು ಬೇರೆ ಬೇರೆ ವಿಧವಾದ ಚಲನೆಗಳಿಗೋಸ್ಕರ ಉತ್ಪತ್ತಿಯಾಗಿರುವುದರಿಂದಲೇ ತಂತುಗಟ್ಟುಗಳು ಸಹ ಆವಶ್ಯಕತೆಗೆ ಅನುಗುಣವಾಗಿ ಹಿಗ್ಗುತ್ತವೆ.  ಆ ಮಿತಿಯನ್ನು ಮೀರಿ ಹಿಗ್ಗಿಸಿದರೆ ಕೀಲುಗಳಲ್ಲಿ ನೋವು ಉತ್ಪತ್ತಿಯಾಗುತ್ತದೆ.  ಕೀಲಿನ ಸುತ್ತ ಇರುವ ಗಟ್ಟಿ ಪೊರೆಯ ಒಳಗಡೆ ಅಸ್ತರಿ ಹಾಕಿರುವ ಸೈನೋವಿಯಲ್ ಪೊರೆಯಿಂದ ಸೈನೋವಿಯ ಎಂಬ ದ್ರವ ಉತ್ಪತ್ತಿಯಾಗುವುದು.  ಇದು ಕೀಲಿನ ಚಲನೆಗೆ ಸಹಕಾರಿ.  ಸೈನೋವಿಯವು ಕೀಲಿನ ಮೃದುಚಾಲಕ ವಸ್ತುವಾಗಿರುವುದೇ ಅಲ್ಲದೆ ಕೀಲಿನ ಮೃದ್ವಸ್ಥಿಗಳಿಗೆ ಪೋಷಕವೂ ಹೌದು.  ಸೈನೋವಿಯಲ್ ಕೀಲುಗಳು, ಎರಡು ಅಕ್ಷಗಳಲ್ಲಿ ಚಲಿಸುವ ಕೀಲುಗಳು ಮತ್ತು ಅನೇಕ ಅಕ್ಷಗಳಲ್ಲಿ ಚಲಿಸುವ ಕೀಲುಗಳೆಂದು ವರ್ಗೀಕರಿಸಬಹುದು. 

ಹಿಂಜ್ ಕೀಲು: ಇದರಲ್ಲಿ ಚಲನೆ ಒಂದೇ ದಿಕ್ಕಿನಲ್ಲಿದೆ.  ಇಂಥ ಕೀಲುಗಳಲ್ಲಿ ಭಾಗವಹಿಸುವ ಮೂಳೆಗಳು ಒಂದನ್ನೊಂದು ಕೂಡಿಕೊಂಡು ಅವುಗಳ ಎರಡು ಬದಿಯಲ್ಲೂ ಬಲು ದಪ್ಪವಾದ ತಂತುಗಟ್ಟುಗಳಿರುತ್ತವೆ.

 ತಿರುಗಣಿ ಕೀಲು (ಪಿವಟ್ ಜಾಯಿಂಟ್): ಇದರಲ್ಲಿ ಕೇವಲ ತಿರುಗುವ ಚಲನೆಯನ್ನು ಕಾಣಬಹುದು.  ಗೂಟದ ಸುತ್ತ ಸುತ್ತುವರಿಯಲ್ಪಟ್ಟ ಬಿಗಿತಂತುವಿನ ಒಳಗೆ ಬೆಣೆ ತಿರುಗಿಸಬಹುದು ಇಲ್ಲವೆ ಬೆಣಿಯಸುತ್ತ ಇರುವ ತಂತುಗಳ ಉಂಗುರ ತಿರುಗಬಹುದು.  ಈ ಉಂಗುರ ಭಾಗಶಃ ಮೂಳೆಯಿಂದ ಇನ್ನುಳಿದ ಭಾಗ ತಂತುವಿನಿಂದ ರಚನೆ ಗೊಂಡಿದೆ. 

ಮೂಳೆತಲೆಯಂತಿರುವ ಕೀಲುಗಳು:  ಒಂದು ಮೂಳೆಯ ಕಹರದಲ್ಲಿ ಮತ್ತೊಂದು ಮೂಳೆಯ ತಲೆ ಸೇರಿ ಈ ತರಹದ ಕೀಲುಗಳುಂಟಾಗುತ್ತವೆ.  ಇವುಗಳಲ್ಲಿ ಎಲ್ಲ ವಿಧವಾದ ಚಲನೆಗಳೂ ನಡೆಯುತ್ತವೆ.

ಸಮತಲಕೀಲು (ಪ್ಲೇನ್ ಜಾಯಿಂಟ್ಸ್):  ಇದರಲ್ಲಿ ಸಮತಲ ಮೇಲ್ಮೈಯಿರುವ ಮೂಳೆಗಳು ಒಂದನ್ನೊಂದು ಎದುರಾಗಿ ಸಂಧಿಸುತ್ತವೆ.  ಇದನ್ನು ಆವರಿಸಿರುವ ತಂತುಗಟ್ಟುಗಳು ಮತ್ತು ಮೂಳೆಯ ಮುಂದೆ ಚಾಚಿಕೊಂಡಿರುವ ಭಾಗಗಳನ್ನು ಅವಲಂಬಿಸಿ ಚಲನೆ ಉಂಟು.

ದವಡೆಕೀಲು: ಮೇಲುಭಾಗದಲ್ಲಿ ಕಪೋಲ ಮೂಳೆಯ ಕುಹರ, ಕೆಳಗಡೆ ದವಡೆ ಮೂಳೆಯ ಮಂಡೆ ಕೂಡಿ ಈ ಕೀಲಾಗಿದೆ.  ಇದನ್ನು ದಪ್ಪ ಪೊರೆ ಸುತ್ತುವರಿದಿದೆ.  ಕೀಲಿನ ಹೊರಪಕ್ಕದಲ್ಲಿ ಒಂದು ತಂತುಗಟ್ಟು ಉಂಟು.  ಸ್ಪೀನೋ ಮ್ಯಾಂಡಿಬ್ಯುಲ್ಲಾರ್, ಸ್ಟೈಮೋಮ್ಯಾಂಡಿಬ್ಯುಲಾರ್ ತಂತುಗುಟ್ಟುಗಳೂ ಇವೆ.  ಆಹಾರವನ್ನು ಅಗಿಯಲು ಈ ಕೀಲು ಸಹಾಯಕವಾಗಿದೆ.  

ಬೆನ್ನುಮೂಳೆಯ ಕೀಲುಗಳು: ಕುತ್ತಿಗೆಯ ಎರಡನೆಯ ಕಶೇರುಖಂಡದಿಂದ ತ್ರಿಕಾಸ್ಥಿಯ (ಸೇಕ್ರಂ) ವರೆಗೆ ಒಂದನ್ನೊಂದು ಮೃದ್ವಸ್ಥಿಗಳಿಂದ ಮತ್ತು ಸೈನೋವಿಯಲ್ ಕೀಲುಗಳಿಂದ ಕೂಡಿಕೊಂಡಿವೆ.  ಬೆನ್ನುಮೂಳೆಗಳ ಕಾಯಗಳ ಮಧ್ಯೆ ತಂತುಮೃದ್ವಸ್ಥಿ ಬಿಲ್ಲೆ ನೆಲೆಸಿದೆ.  ಈ ಬೆನ್ನು ಮೂಳೆಗಳನ್ನು ಮುಂಭಾಗದಲ್ಲಿ ಮತ್ತು ಹಿಂಬದಿಯಲ್ಲಿ ಉದ್ದವಾದ ತಂತುಗಟ್ಟುಗಳು ಬಿಗಿದಿವೆ.  ಬೆನ್ನುಲುತಂತು (ಸುಪ್ರಸ್ಪೈನಸ್ ಲಿಗಮೆಂಟ್) ಇತ್ಯಾದಿ.

ತ್ರಿಕಾಸ್ಥಿ ಮತ್ತು ಕಾಕ್ಸಿಕ್ಸ್‍ಕೀಲು (ಸ್ಯಾಕ್ರೊ ಕಾಕ್ಸೀಜಿಯಲ್ ಜಾಯಿಂಟ್): ಇದು ಮೃದ್ವಸ್ಥಿಕೀಲು.  ಇದಕ್ಕೆ ಸಹಾಯಕವಾಗಿ ಮುಂಭಾಗದ, ಹಿಂಬದಿಯ ಮತ್ತು ಪಕ್ಕದ ತಂತುಗಟ್ಟುಗಳಿವೆ.  ಈ ಎರಡು ಮೂಳೆಗಳೂ ಕೂಡವಲ್ಲಿ ತಂತು ಮೃದ್ವಸ್ಥಿ ಬಿಲ್ಲೆ ಇದೆ.   

 ಅಟ್ಲಾಂಟೋ ಅಕ್ಸಿಯಲ್ ಕೀಲು:  ಮೂರು ಸೈನೋವಿಯಲ್ ಕೀಲುಗಳಿಂದ ಕೂಡಿದೆ.  ಮಧ್ಯಮ ಕೀಲು ತಿರುಗಣಿ ಕೀಲು.

ಅಟ್ಲಾಂಟೋ ಆಕ್ಸಿಪಿಟಲ್ ಕೀಲು : ಬೆನ್ನುಮೂಳೆ ಮತ್ತು ತಲೆಬುರುಡೆಯನ್ನು ಕೂಡಿಸುತ್ತದೆ.

ಪಕ್ಕೆಲುಬು ಬೆನ್ನುಮೂಳೆಯ ಕೀಲು : ಇದರಲ್ಲಿ ಪಕ್ಕೆಲುಬುಗಳ ತಲೆಗಳು ಬೆನ್ನುಮೂಳೆಯ ಕಾಯದೊಳಕ್ಕೆ ಸೇರಿರುತ್ತವೆ. ಕುತ್ತಿಗೆ ಮತ್ತು ಮೂಳೆಯ ಗುಬಟುಗಳು ಬೆನ್ನುಮೂಳೆಯ ಅಡ್ಡಚಾಚುವಿನೊಂದಿಗೆ ಸೇರುತ್ತವೆ.

ಎದೆಮೂಳೆ ಪಕ್ಕೆಲುಬು ಕೀಲು : ಮೊದಲನೆಯ ಪಕ್ಕೆಲುಬಿನ ಕೀಲು ಮೃದ್ವಸ್ಥಿಯ ಕೀಲಾಗಿದ್ದು ಉಳಿದವು ಸೈನೋವಿಯಲ್ ಕೀಲುಗಳಾಗಿವೆ.

ಎದೆಮೂಳೆ ಗ್ರೀವಾಸ್ಥಿಕೀಲು (ಸ್ಟರ್ನೋಕ್ಲ್ಯಾವಿಕ್ಯುಲರ್ ಜಾಯಿಂಟ್): ಈ ಕೀಲು ಗ್ರೀವಾಸ್ಥಿ ಮತ್ತು ಎದೆಮೂಳೆಯನ್ನು ಕೂಡಿಸುತ್ತದೆ.  ಇದಕ್ಕೆ ಕೀಲಿನ ದಪ್ಪ ಪೊರೆ, ಮುಂಭಾಗದ ಮತ್ತು ಹಿಂಭಾಗದ ಗ್ರೀವಾಸ್ಥಿ ಎದೆಮೂಳೆಯ ತಂತುಗಟ್ಟುಗಳು ಮತ್ತು ಅಂತರಗ್ರೀವಾಸ್ಥಿಯ ತಂತು ಮತ್ತು ಪಕ್ಕೆಲುಬು ಗ್ರೀವಾಸ್ಥಿ ತಂತುಗಟ್ಟುಳಿವೆ.

ಹೆಗಲೆಲುಬು ಗ್ರೀವಾಸ್ಥಿ ಕೀಲು : ಇದು ಹೆಗಲೆಲುಬನ್ನು ಗ್ರೀವಾಸ್ಥಿಯೊಡನೆ ಸೇರಿಸುತ್ತದೆ.  ಇದು ಸಮತಲಕೀಲು.  ಇದಕ್ಕೆ ದಪ್ಪಪೊರೆ, ಅಕ್ರೋಮೀಯೋ ಕ್ಲ್ಯಾವಿಕ್ಯುಲಾರ್ ಮತ್ತು ಕೊರಾಕೋಕ್ಲ್ಯಾವಿಕ್ಯುಲಾರ್ ತಂತುಗಟ್ಟುಗಳಿವೆ.

ಭುಜದ ಕೀಲು : ಇದು ಒರಳುಗುಂಡಿ ಕೀಲು (ಬಾಲ್ ಅಂಡ್ ಸಾಕೆಟ್ ಜಾಯಿಂಟ್) ಮೇಲ್ತೋಳಿನ ಎಲುಬಿನ ತಲೆ ಮತ್ತು ಸ್ಕಂದಾಸ್ಥಿಯ ಕೀಲುಕುಳಿಗಳ ಮಧ್ಯೆ ಈ ಕೀಲಿದೆ.  ಈ ಕೀಲಿನ ಸುತ್ತ ದಪ್ಪ ಪೊರೆಯಿದೆ.  ಈ ಕೀಲಿನಲ್ಲಿ ಎಲ್ಲ ವಿಧವಾದ ಚಲನೆಗಳು ಸಾಧ್ಯ.

ಮೊಣಕೈ ಕೀಲು : ಇದರಲ್ಲಿ ಎರಡು ಕೀಲುಗಳಿವೆ.  ಮೇಲ್ತೋಳಿನ ಎಲುಬು ಮುಂದೋಳಿನ ಹೊರ ಮತ್ತು ಒಳ ಎಲುಬುಗಳೊಂದಿಗೆ ಕೀಲುಗಳನ್ನು ಉಂಟು ಮಾಡಿವೆ.  ಇವು ತಿರುಗಣಿ ಕೀಲುಗಳು.  ಇವುಗಳಿಗೆ ಸಹಾಯಕವಾಗಿ ದಪ್ಪಪೊರೆ, ಮುಂದೋಳಿನ ಹೊರಮೂಳೆ (ಅಲ್ನಾ) ಮತ್ತು ಒಳಮೂಳೆಗಳ (ರೇಡಿಯಸ್) ಪಕ್ಕಪಕ್ಕದ ತಂತುಗಟ್ಟುಗಳಿವೆ.

ಮಣಿಕಟ್ಟು ಕೀಲು : ಇದು ಮುಂದೋಳಿನ ಒಳಮೂಳೆ (ಅಲ್ನಾ)ಯ ಕೆಳಭಾಗ, ರೇಡಿಯಸ್‍ನ ಕೆಳ ಕೊನೆಯ ಭಾಗ ಮೇಲಗಡೆ, ದ್ರೋಣಾಸ್ಥಿ, ಬಾಲಚಂದ್ರಾಕೃತಿ ಅಸ್ಥಿ ಮತ್ತು ತ್ರಿಕೋನಾಸ್ಥಿಗಳು ಕೆಳಗಡೆ ಸೇರಿ ಈ ಕೀಲಾಗಿದೆ.  ಇದರ ಸುತ್ತ ದಪ್ಪನಾದ ಕೀಲುಪೊರೆ ಉಂಟು.  ಈ ಪೊರೆಗೆ ಸಹಾಯಕವಾಗಿ ಅಂಗೈಯ್ಯ ರೇಡಿಯೋ ಕಾರ್ಪಲ್, ಹಿಂಗೈಯ್ಯ ರೇಡಿಯೋ ಕಾರ್ಪಲ್, ರೇಡಿಯಲ್ ಕೊಲ್ಯಾಟರಲ್ ಅಂಗೈ ಅಲ್ನೋಕಾರ್ಪಲ್, ಅಲ್ತಾರ್ ಕೊಲ್ಯಾಟರಲ್ ತಂತುಗಟ್ಟುಗಳಿವೆ.

ಅಂತರ ಮಣಿಕಟ್ಟುಗಳ ಕೀಲುಗಳು : ಈ ಮಣಿಕಟ್ಟುಗಳಲ್ಲಿ ಒಂದನ್ನೊಂದು ಹಿಂಬದಿಯ, ಅಂಗೈಕಡೆಯ ಮತ್ತು ಅಂತರಮೂಳೆಗಳ ತಂತುಗಟ್ಟುಗಳು ಬಂಧಿಸಿವೆ.

ಮಣಿಕಟ್ಟುಗಳು ಮತ್ತು ಮುಂಮಣಿಕಟ್ಟುಗಳ ಕೀಲುಗಳು : ಹೆಬ್ಬರಳಿನ ಕೀಲು ಮೊದಲನೆಯ ಮುಂಮಣಿಕಟ್ಟು ಮತ್ತು ಚತುರ್ಭುಜಾಸ್ಥಿಗಳಿಂದ ಆಗಿವೆ.  ಕೀಲುಗಳ ದಪ್ಪಪೊರೆಯಿದೆ.  ಇವುಗಳಿಗೆ ಸಹಾಯಕವಾಗಿ ಪಕ್ಕದ ಮುಂಭಾಗದ ಮತ್ತು ಹಿಂಬದಿಯ ತಂತುಗಟ್ಟುಗಳಿವೆ; ಎರಡು, ಮೂರು, ನಾಲ್ಕು ಮತ್ತು ಐದನೆಯ ಮುಂಮಣಿಕಟ್ಟುಗಳು ಮಣಿಕಟ್ಟುಗಳೊಡನೆ ಸೇರಿ ಕೀಲುಗಳಾಗಿವೆ.  ಈ ಕೀಲುಗಳಿಗೆ ದಪ್ಪಪೊರೆ, ಅಂತರ ಮೂಳೆ ತಂತುಗಟ್ಟು, ಹಿಂಬದಿಯ ಮತ್ತು ಅಂಗೈ ತಂತುಗಟ್ಟುಗಳು ಸಹಾಯಕವಾಗಿವೆ. ಮುಂಮಣಿಕಟ್ಟುಗಳು ಬೆರಳು ಮೂಳೆಗಳೊಡನೆ ಸೇರಿ ಕೀಲಗಳುಂಟಾಗಿವೆ.  ಇವುಗಳಿಗೆ ಅಂಗೈಕಡೆ ಒಂದು ತಂತುಗಟ್ಟು ಮತ್ತು ಎರಡು ಪಕ್ಕದ ತಂತುಗಟ್ಟುಗಳಿವೆ: ಅಂತರ ಬೆರಳೆಲುಬು ಕೀಲುಗಳು ತಿರುಗಣಿ ಕೀಲುಗಳು.  ಪ್ರತಿಕೀಲಿಗೂ ಒಂದು ಅಂಗೈತಂತುಗಟ್ಟು ಮತ್ತು ಎರಡು ಪಕ್ಕ ಪಕ್ಕದ ತಂತುಗಟ್ಟುಗಳಿವೆ.

ವಸ್ತಿಕುಹರದಲ್ಲಿತ್ರಿಕಾಸ್ಥಿ ಮತ್ತು ರೊಂಡಿಯ ಎಲುಬಿನ ಕೀಲು, ಎರಡು ಪ್ಯೂಬಿಕ್ ಮೂಳೆಗಳ ಮಧ್ಯ ಕೀಲುಗಳಿವೆ.  ರೊಂಡಿಯ ಎಲುಬು ಬೆನ್ನುಮೂಳೆಗಳ ಸಂಗಡ ಇನ್ನೊಂದು ಕೀಲನ್ನು ಉಂಟುಮಾಡುತ್ತದೆ.

ರೊಂಡಿ ಕೀಲು (ಹಿಪ್‍ಜಾಯಿಂಟ್) : ಇದು ತೊಡೆ ಮೂಳೆಯ ತಲೆ ಮತ್ತು ಎಲುಬಿನ ಕುದುರುಗಳಿಂದ ಆಗಿದೆ.  ಈ ಕೀಲಿನ ಸುತ್ತ ದಪ್ಪಪೊರೆಯಿದೆ.  ಇದರಲ್ಲಿ ಎಲ್ಲ ವಿಧವಾದ ಚಲನೆಗಳು ಉಂಟಾಗುತ್ತವೆ.

 ಮಂಡಿಕೀಲು : ಇದು ಸ್ವಲ್ಪ ಮಾರ್ಪಾಡು ಹೊಂದಿದ ತಿರುಗಣಿ ಕೀಲು.  ಈ ಕೀಲಿನಲ್ಲಿ ತೊಡೆಮೂಳೆ, ಮೊಣಕಾಲ ಮೂಳೆ ಮತ್ತು ಮಂಡಿ ಚಿಪ್ಪುಗಳು ಪಾತ್ರ ವಹಿಸುತ್ತವೆ.  ದಪ್ಪಪೊರೆ, ಮಂಡಿಚಿಪ್ಪು ತಂತುಗಟ್ಟು, ತೊಡೆ ಮತ್ತು ಮೊಣಕಾಲಮೂಳೆಗಳ ಪಕ್ಕಪಕ್ಕದ ತಂತುಗಟ್ಟುಗಳು, ನೇರತಪ್ಪಿದ ಮತ್ತು ಕಮಾನಿ ನಾಕಾರದ, ಮಂಡಿಯ ಹಿಂಭಾಗದಲ್ಲಿನ ಕುಳಿಯ ತಂತುಗಟ್ಟುಗಳು ಮುಂದಿನ ಮತ್ತು ಶಿಲುಬೆಯಾಕಾರದ ಮತ್ತು ಅಡ್ಡನಾದ ತಂತುಗಟ್ಟುಗಳು ಸಹಾಯಕವಾಗಿವೆ.  ಈ ಕೀಲನ್ನು ಮಡಿಸಲು, ಉದ್ದಮಾಡಲು ಮತ್ತು ಸ್ವಲ್ಪ ಹೊರಳಿಸಲು ಸಾಧ್ಯವಿದೆ.

ಮುಂಗಾಲುಕೀಲು (ಏಂಕಲ್ ಜಾಯಿಂಟ್): ಇದು ತಿರುಗಣಿಕೀಲು, ಮಂಡಿ ಕಾಲಿನ ಕೆಳಭಾಗ ಮತ್ತು ಫಿಬುಲ ಮೂಳೆಯ ಕೆಳಭಾಗ, ಮೇಲುಗಡೆ, ಹರಡೆಲುಬು ಕೆಳಗಡೆ ಸೇರಿ ಈ ಕೀಲಾಗಿದೆ.  ದಪ್ಪಪೊರೆ, ತ್ರಿಕೋನಾಕಾರದ ತಂತುಗಟ್ಟು ಮುಂಭಾಗದ ಮತ್ತು ಹಿಂಭಾಗದ ಟ್ಯಾಲೋಫೀಬ್ಯುಲಾರ್ ತಂತುಗಟ್ಟುಗಳಿವೆ.  ಅಂತರಟಾರ್ಸಲ್ ಕೀಲುಗಳು ಅನೇಕವಿವೆ. ಟ್ಯಾಲೋಕಾಲ್‍ಕೇನಿಯಸ್, ಟ್ಯಾಲೋಕ್ಲಾಲ್ ಕೇನಿಯೋ ನ್ಯಾವಿಕ್ಯುಲಾರ್, ಕ್ಲಾಲ್ಕೆನಿಯೋ ಕ್ಯೂಬಾಯ್ಡ್, ಕ್ಯಾನಿಯೋ, ನ್ಯಾವಿಕ್ಯುಲಾರ್ ಕ್ಯೂಬಾಯ್ಡೋ ನ್ಯಾವಿಕ್ಯುಲಾರ್ ಇಂಟರ್‍ಕ್ಯೂನಿಫಾರಾ ಮತ್ತು ಕ್ಯೂನಿಯೋ ಕ್ಯೂಬಾಯ್ಡ್ ಕೀಲುಗಳಿವೆ.

ಟಾರ್ಸೋ ಮೆಟಟಾರ್ಸಲ್ ಕೀಲುಗಳು : ಇವು ಸೈನೋವಿಯಲ್ ಕೀಲುಗಳು.  ಮೊದಲನೆಯ ಮೆಟಟಾರ್ಸಲ್ ಮೂಳೆ ಒಳಬದಿಯ ಬೆಣೆಯಸ್ಥಿಯ ಸಂಗಡ ಎರಡನೆಯ ಒಳಬದಿಯ ಮತ್ತು ಹೊರಬದಿಯ ಬೆಣೆಯಸ್ಥಿಯ ಮಧ್ಯೆ ಮತ್ತು ಮಧ್ಯಬೆಣೆಯಸ್ಥಿಯ ಸಂಗಡ, ಮೂರನೆಯದು ಹೊರಬದಿಯ ಬೆಣೆಯಸ್ಥಿಯ ಸಂಗಡ, ನಾಲ್ಕನೆಯದು ಘನಾಕೃತಿ ಮೂಳೆಯ ಸಂಗಡ ಮತ್ತು ಹೊರಬದಿಯ ಬೆಣೆಯಸ್ಥಿಯ ಸಂಗಡ, ಐದನೆಯ ಘನಾಕೃತಿಮೂಳೆಯ ಸಂಗಡ ಸೇರಿ ಕೀಲುಗಳುಂಟಾಗಿವೆ.  ಹಿಂಬದಿಯ ಮತ್ತು ಅಂಗಾಲಿನ ಟಾರ್ಸೋ ಮೆಟಾಟಾರ್ಸಲ್ ಮತ್ತು ಅಂತರ ಮೂಳೆಯ ಬೆಣೆಯಸ್ಥಿ ಮೆಟಾಟಾರ್ಸಲ್ ತಂತುಗಟ್ಟುಗಳಿಂದ ಬಿಗಿಯಲ್ಲಟ್ಟಿವೆ.

ಮೆಟಾಟಾರ್ಸೋಬೆರಳೆಲುಬುಗಳ ಕೀಲುಗಳು : ಇವು ಮೂಳೆ ತಲೆಯಂತಿರುವ ಕೀಲುಗಳು.  ಮೆಟಾಟಾರ್ಸಲ್ ಮೂಳೆಗಳು, ಸಮೀಪದ ಕಾಲ್ಬೆರಳುಗಳ ಎಲುಬಿನೊಂದಿಗೆ ಸೇರಿ ಈ ಕೀಲುಗಳುಂಟಾಗಿವೆ.  ದಪ್ಪಪೊರೆ, ಅಂಗಾಲಿನ, ಆಳವಾದ ಅಡ್ಡವಾಗಿರುವ ಮೆಟಾಟಾರ್ಸಲ್ ಮತ್ತು ಪಕ್ಕಪಕ್ಕದ ತಂತುಗಟ್ಟುಗಳು ಸಹಾಯಕವಾಗಿವೆ.

ಅಂತರ ಕಾಲ್ಬೆರಳುಗಳ ಮೂಳೆಗಳ ಕೀಲುಗಳು : ತಿರುಗಣಿಕೀಲುಗಳು ದಪ್ಪ ಪೊರೆ ಮತ್ತು ಎರಡು ಪಕ್ಕಪಕ್ಕದ ತಂತುಗಟ್ಟುಗಳು ಇವನ್ನು ಬಂಧಿಸಿವೆ.   

(ಎ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ